ಒಡಂಬಡಿಕೆಯಲಿ ದೃಢತೆಗಾಗಿ (#9444)

ಓ ಪ್ರಭುವೇ, ನಿನ್ನ ಹಾದಿಯಲ್ಲಿ ನಮ್ಮ ಹೆಜ್ಜೆಯನ್ನು ಭದ್ರಪಡಿಸು.  ನಿನ್ನ ಆಜ್ಞಾಧಾರಕರಾಗಿರಲು ನಮ್ಮ ಮನಸ್ಸನ್ನು ಸ್ಥಿರಪಡಿಸು.  ನಿನ್ನ ವ್ಯಕ್ತಿತ್ವದ ಸೌಂದರ್ಯದ ಕಡೆ ನಮ್ಮ ದೃಷ್ಟಿ ಹೊರಳುವಂತೆ ಮಾಡು.  ನಿನ್ನ ದೈವಿಕ ಏಕೀಭಾವದ ಸೂಚನೆಗಳಿಂದ ನಮ್ಮ ಎದೆಯನ್ನು ಉಬ್ಬುವಂತೆ ಮಾಡು.  ನಿನ್ನ ಔದಾರ್ಯದ ನಿಲುವಂಗಿಯಿಂದ ನಮ್ಮ ಶರೀರಗಳನ್ನು ಅಲಂಕರಿಸು.  ನಮ್ಮ ಕಣ್ಣಿನಿಂದ ಪಾಪದ ಪರದೆಯನ್ನು ತೊಡೆದು ಹಾಕಿ ನಿನ್ನ ಘನತೆಯ ಬಟ್ಟಲನ್ನು ದಯಪಾಲಿಸು.  ಎಲ್ಲ ಜೀವಿಗಳ ಭಾವನೆಯೂ ನಿನ್ನ ವೈಭವದ ಕುರಿತು ಪಾಡುವಂತಾಗಲಿ.  ಓ ಪ್ರಭುವೇ, ಆಗ ನೀನು ನಿನ್ನ ಕೃಪಾಕಟಾಕ್ಷದ ಮಾತುಗಳಿಂದ ಪ್ರಸನ್ನನಾಗು.  ಭಗವಂತನ ಸಾಕ್ಷಾತ್ಕಾರದ ಪವಾಡವನ್ನು ತೋರಿಸುವವನಾಗು.  ಪ್ರಾರ್ಥನೆಯ ಪವಿತ್ರ ತನ್ಮಯತೆಯು ನಮ್ಮ ಆತ್ಮಗಳನ್ನು ಸೇರಲಿ.  ಈ ಪ್ರಾರ್ಥನೆಯು ಶಬ್ದೋಚ್ಚಾರಗಳಿಗಿಂತ, ಅಕ್ಷರಗಳಿಗಿಂತ ಉನ್ನತವಾಗಿರಲಿ, ಧ್ವನಿಯ ನಾದಗಳನ್ನು ಮೀರೇರಲಿ.
 ಪ್ರಭುವೇ, ಇವರೆಲ್ಲ ನಿನ್ನ ದಾಸರು ನಿಷ್ಠೆಯಿಂದಿರುವವರು ನಿನ್ನ ಒಡಂಬಡಿಕೆ ಹಾಗೂ ಉಯಿಲಿನ ಬಗ್ಗೆ ಅಚಲ ಭಾವನೆಯುಳ್ಳವರು.  ನಿನ್ನ ತತ್ವದ ಬಗ್ಗೆ ಪಟ್ಟು ಹಿಡಿದವರು.  ನಿನ್ನ ವೈಭವದ ಅಂಚನ್ನು ಅಪ್ಪಿಹಿಡಿದುಕೊಂಡಿರುವವರು.  ಓ ಪರಮಾತ್ಮನೇ, ನಿನ್ನ ದಯಾಮಯ ಪ್ರೀತಿಯಿಂದ ಅವರಿಗೆ ಸಹಾಯವೆಸಗು.  ನಿನ್ನ ಶಕ್ತಿಯಿಂದ ಅವರನ್ನು ಊರ್ಜಿತಗೊಳಿಸು.  ನಿನಗೆ ವಿಧೇಯರಾಗಿರುವಂತೆ ಅವರ ಟೊಂಕವನ್ನು ನಿನ್ನ ಪ್ರಭಾವದಿಂದ ಬಲಗೊಳಿಸು.  ನೀನು ಕ್ಷಮಾಶೀಲನಾಗಿದ್ದೀಯೇ ಗೌರವ ಪ್ರದನಾಗಿದ್ದೀಯೇ.

-`Abdu'l-Bahá
-----------------------

ಒಡಂಬಡಿಕೆಯಲಿ ದೃಢತೆಗಾಗಿ (#9445)

ಓ ನನ್ನ ಪ್ರಭುವೇ ಹಾಗೂ ನನ್ನ ಭರವಸೆಯೇ! ನಿನ್ನ ಪ್ರೀತಿಪಾತ್ರರು, ಉನ್ನತವಾದ ನಿನ್ನ ಒಡಂಬಡಿಕೆಯಲ್ಲಿ ದೃಢರಾಗಿರುವಂತೆಯೂ, ನಿನ್ನಿಂದ ಪ್ರಕಟಿತ ಧರ್ಮಕ್ಕೆ ವಿಧೇಯರಾಗಿರುವಂತೆಯೂ ಹಾಗೂ ನಿನ್ನ ಭವ್ಯತೆಯ ಗ್ರಂಥದಲ್ಲಿ ಅವರಿಗಾಗಿ ನೀನು ವಿಧಿಸಿರುವ ಆಜ್ಞೆಗಳನ್ನು ಪಾಲಿಸುವಲ್ಲಿ ಅವರಿಗೆ ಸಹಾಯಮಾಡು; ಇದರಿಂದ ಅವರು ದಿವ್ಯಲೋಕದ ಒಡನಾಡಿಗಳ ಮಾರ್ಗದರ್ಶನದ ನಿಶಾನೆ ಹಾಗೂ ನಿನ್ನ ಅನಂತ ವಿವೇಕದ ಕಾರಂಜಿಗಳೂ, ಅಲೌಕಿಕ ಗಗನದಲ್ಲಿ ಸರಿಯಾದ ಮಾರ್ಗ ತೋರುವ ನಕ್ಷತ್ರಗಾಳೂ ಆಗಬಹುದು.  ನಿಜವಾಗಿಯೂ, ಅಜೇಯನೂ, ಸರ್ವಶಕ್ತನೂ, ಬಲಿಷ್ಠನೂ ನೀನೇ ಆಗಿರುವೆ.

-`Abdu'l-Bahá
-----------------------

